ಡೆಕ್ಕನ್ ಹೆರಾಲ್ಡ್

ಬೆಂಗಳೂರಿನಿಂದ ಪ್ರಕಟವಾಗುತ್ತಿರುವ ಇಂಗ್ಲಿಷ್ ದೈನಿಕ. ಐವತ್ತರ ದಶಕ ಭಾರತೀಯ ಪತ್ರಿಕಾ ವ್ಯವಸಾಯ ಒಂದು ಉದ್ದಿಮೆಯಾಗಿ ಬೆಳೆದ ದಶಕ. ಕರ್ನಾಟಕದಲ್ಲಿ ಇಂಥದೊಂದು ಬೆಳವಣಿಗೆಗೆ ನಾಂದಿ ಹಾಡಿದ್ದು ಉದ್ಯಮಿ ಕೆ. ಎನ್. ಗುರುಸ್ವಾಮಿ. ಅವರು ತಮ್ಮ ಮಿತ್ರರೊಡಗೂಡಿ ಆರಂಭಿಸಿದ ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಆರಂಭಿಸಿದ ದಿನ ಪತ್ರಿಕೆ. ಡೆಕ್ಕನ್‍ಹೆರಾಲ್ಡ್ ಮೊದಲ ಸಂಚಿಕೆ ಪ್ರಕಟವಾದದ್ದು 1948ರ ಜೂನ್ 17 ರಂದು. ಟ್ಯಾ ಬ್ಲಾಯ್ಡ್ ಆಕಾರದಲ್ಲಿತ್ತು. ಮರು ವರ್ಷ ಶಿಷ್ಟ ಆಕಾರ ತಳೆಯಿತು. ಪ್ರಜಾಪ್ರಭುತ್ವದ ಯಾವುದೇ ಆಧುನಿಕ ವೃತ್ತ ಪತ್ರಿಕೆಯಂತೆ, ಇದೂ ಕೂಡ ತನ್ನ ಓದುಗರಿಗೆ ಸುದ್ದಿ ಸಮಾಚಾರ ತಿಳಿಸುವುದರ ಜೊತೆಗೆ ಸಮುದಾಯದ ಹಿತದೃಷ್ಟಿಯಿಂದ ಸಾರ್ವಜನಿಕ ಅಭಿಪ್ರಾಯವನ್ನು ವ್ಯಾಖ್ಯಾನಿಸುವ, ಪ್ರತಿಬಿಂಬಿಸುವ ಕೆಲಸವನ್ನು ಮಾಡುತ್ತಿದೆ. ಸುದ್ದಿ ಹಾಗೂ ಚಿತ್ರಗಳ ಸಂಗ್ರಹಣೆಗಾಗಿ ರಾಜ್ಯದಲ್ಲಿ ವರದಿಗಾರರ ವಿಸ್ತøತವಾದ ಜಾಲವಿದೆ. ರಾಷ್ಟ್ರ, ರಾಜ್ಯಗಳ ರಾಜಧಾನಿಗಳಲ್ಲಿ ಹಾಗೂ ಅಮೆರಿಕ, ಬ್ರಿಟನ್ ಮೊದಲಾದ ಹೊರ ರಾಷ್ಟ್ರಗಳಲ್ಲಿ ವಿಶೇಷ ವರದಿಗಾರರನ್ನು ಹೊಂದಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಕ್ರೀಡಾಕೂಟಗಳಿಗೆ, ವಿಶೇಷ ಸಮಾರಂಭಗಳಿಗೆ ವರದಿಗಾರರನ್ನು ಛಾಯಾಚಿತ್ರಕಾರರನ್ನು ಕಳುಹಿಸುತ್ತಿದೆ. ಮುದ್ರಣ ವಿನ್ಯಾಸದಲ್ಲಿ, ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಖುಷ್ವಂತ್‍ಸಿಂಗ್ ಮೊದಲಾದ ಖ್ಯಾತಬರಹಗಾರರ ಲೇಖನಗಳು ಅಂಕಣಗಳು, ನಿರ್ಭೀತ ಸಂಪಾದಕೀಯ ಬರಹಗಳು ಈ ಪತ್ರಿಕೆಯ ವಿಶೇಷ. ಭಾನುವಾರದ ವೈಶಿಷ್ಟ್ಯಪೂರ್ಣ ಪುರವಣಿಯಲ್ಲದೆ, ಮಹಿಳೆ, ಮಕ್ಕಳು, ಚಲನಚಿತ್ರ, ಕಲೆ, ಕ್ರೀಡೆ, ವಾಹನ, ಆಧುನಿಕ ತಂತ್ರಜ್ಞಾನ, ಕುರಿತಾದ ದೈನಿಕ ಪುರವಣಿಗಳ ಓದುಗರ ವಿವಿಧ ಆಸಕ್ತಿಯನ್ನು ತಣಿಸುತ್ತವೆ. ಇವುಗಳಿಂದಾಗಿ ಖ್ಯಾತ ಪತ್ರಿಕಾ ಸಂಸ್ಥೆಗಳ ಸ್ಪರ್ಧೆಯನ್ನು ಎದುರಿಸಿ, ರಾಜ್ಯದ ಪರಿಪೂರ್ಣ ದಿನಪತ್ರಿಕೆಯಾಗಿ ರಾಷ್ಟ್ರದ ಪ್ರಮುಖ ಇಂಗ್ಲಿಷ್ ದೈನಿಕಗಳಲ್ಲಿ ಒಂದೆನಿಸಿದೆ. ಆರಂಭದಲ್ಲಿ ಪೋತನ್ ಜೊಸೆಫ್ ಒಂದು ದಶಗಳ ಕಾಲ ಸಂಪಾದಕರಾಗಿದ್ದರು. `ಓವರ್ ಎ ಕಪ್ ಆಫ್ ಟೀ ದೈನಿಕ ಅಂಕಣ ಜನಪ್ರಿಯವಾಗಿತ್ತು. ಅನಂತರ, ಜಿ.ವಿ ಕೃಪಾನಿಧಿ, ವಿ.ಬಿ.ಮೆನನ್, ವಿ.ಕೆ. ನರಸಿಂಹನ್, ಎಂ.ಪಿ. ಯಶವಂತಕುಮಾರ್ ಸಂಪಾದಕರಾದರು. ವಿಜ್ಞಾನ ಶಿಕ್ಷಣ, ವಾಹನಗಳ, ಮಹಿಳೆ, ಸ್ಥಿರಾಸ್ತಿ, ಸೈಬರ್ ಮನರಂಜನೆ ಮೊದಲಾದ ಉಪಯುಕ್ತ ವಿಷಯ ಸಂಬಂಧಿಪುರವಣಿಗಳ ಜತೆಗೆ ಬೆಂಗಳೂರು ನಗರಕ್ಕೆ ಸೀಮೀತವಾದ ಮೆಟ್ರೊಲೈಫ್ ನಾಲ್ಕು ಪುಟಗಳ ಪುರವಣಿಯನ್ನು ನೀಡಿ ಓದುಗರಿಗೆ ಮಾರ್ಗದರ್ಶನ ನೀಡುತ್ತಿದೆ. ಇತ್ತೀಚೆಗೆ ವೃತ್ತಿಪರ ವಿನ್ಯಾಸಕಾರರ ಪಡೆದಿರುವ ಪತ್ರಿಕೆಯ ಆಕಾರ ಹಿತವಾಗಿದೆ,  1988-ರಲ್ಲಿ ಪ್ರಿಂಟರ್ಸ್ ಲಿಮಿಟೆಡ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಕೆ. ಎನ್. ಹರಿಕುಮಾರ್ ಪ್ರಧಾನ ಸಂಪಾದಕರಾದರು. ಈಗಿನ ಸಂಪಾದಕರು ಕೆ. ಎನ್. ಶಾಂತಕುಮಾರ್.

ಆರಂಭದಲ್ಲಿ ಬೆಂಗಳೂರಿನಿಂದಲೇ ಪತ್ರಿಕೆ ಅಚ್ಚಾಗಿ, ರಾಜ್ಯಾದ್ಯಂತ ವಿತರಣೆಯಾಗುತ್ತಿತ್ತು. ಈಗ, ಹುಬ್ಬಳ್ಳಿ-ಧಾರವಾಡ, ಮಂಗಳೂರು, ಗುಲ್ಬರ್ಗಾ ಮತ್ತು ಶಿವಮೊಗ್ಗ ಕೇಂದ್ರಗಳಿಂದಲೂ ಪ್ರಕಟವಾಗುತ್ತಿದೆ. ಪ್ರಜಾವಾಣಿ, ಕನ್ನಡ ದೈನಿಕ, ಸುಧಾ ವಾರಪತ್ರಿಕೆ ಮತ್ತು ಮಯೂರ ಮಾಸಪತ್ರಿಕೆ, ಈ ಸಂಸ್ಥೆಯ ಇತರ ಪ್ರಕಟಣೆಗಳು. 		(ಪರಿಷ್ಕರಣೆ: ಜಿ.ಎಂ)

ಪ್ರಜಾವಾಣಿ
ನಾಡಿಗೆ ಸ್ವಾತಂತ್ರ್ಯ ಬಂದ ಮೇಲೆ ಆರಂಭವಾದ ಕೂಡು ಬಂಡವಾಳದ ವೃತ್ತಪತ್ರಿಕಾ ಪ್ರಕಾಶನ ಸಂಸ್ಥೆಗಳಲ್ಲಿ `ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ ಗಮನಾರ್ಹವಾದುದು. ಉದ್ಯಮಿ ಕೆ.ಎನ್.ಗುರುಸ್ವಾಮಿ ನೇತೃತ್ವದಲ್ಲಿ ರೂಪುಗೊಂಡ ಈ ಸಂಸ್ಥೆ ಮೊದಲು ಡೆಕನ್ ಹೆರಾಲ್ಡ್ ದೈನಿಕವನ್ನು (1948, ಜೂನ್ 17) ಮತ್ತು ನಾಲ್ಕು ತಿಂಗಳನಂತರ 1948ರ ಅಕ್ಟೋಬರ್ 15 ರಂದು ಪ್ರಜಾವಾಣಿ ಕನ್ನಡ ದೈನಿಕವನ್ನು ಪ್ರಕಟಸಿತು. ಈ ಎರಡು ದೈನಿಕಗಳು ಕರ್ನಾಟಕದ ಪತ್ರಿಕೋದ್ಯಮದಲ್ಲಿ ಇತಿಹಾಸದಲ್ಲಿ ಎದ್ದು ಕಾಣುವ ಘಟನೆ. 
ಪ್ರಜಾವಾಣಿಯ ಮೊದಲ ಸಂಪಾದಕರು. ಬಿ. ಪುಟ್ಟಸ್ವಾಮಯ್ಯ ಅವರ ನಂತರ ಸಂಸ್ಥೆಯ ಜನರಲ್ ಮ್ಯಾನೇಜರ್ ಸಿ.ಜಿ.ಕೆ. ರೆಡ್ಡಿ ಕೆಲಕಾಲ ಸಂಪಾದಕರಾಗಿದ್ದ ಟಿ.ಎಸ್. ರಾಮಚಂದ್ರರಾವ್ (ನೋಡಿ) ಸಂಪಾದಕರಾಗಿ 27 ವರ್ಷಕಾಲ ಸಮರ್ಥವಾಗಿ ಮುನ್ನಡೆಸಿದರು. ಇವರು ಬರೆಯುತ್ತಿದ್ದ `ಛೂಬಾಣ ಅಂಕಣ ಜನಪ್ರಿಯವಾಗಿತ್ತು. ತಿಳಿಹಾಸ್ಯದಲ್ಲಿ ಚುಚ್ಚುಮಾತಿನಲ್ಲಿ ರಾಜ್ಯದ ರಾಜಕೀಯ, ಸಾಮಾಜಿಕ ಆಗುಹೋಗುಗಳಿಗೆ ಟೀಕೆ ಟಿಪ್ಪಣಿಗಳನ್ನು ಛೂಬಾಣ ಒದಗಿಸುತ್ತಿತ್ತು.
ಸುದ್ಧಿಮನೆಗೆ ಸುದ್ಧಿ ಸರಬರಾಜು ಮಾಡುವ ಟೆಲಿಪ್ರಿಂಟರ್ ಯಂತ್ರಕ್ಕೆ ಅಂಟಿಕೊಂಡಿತ್ತು. ಅಂದಿನ ಪತ್ರಿಕೋದ್ಯಮ. ಸ್ವಾತಂತ್ರ್ಯ ಬಂದ ಮೇಲೂ ಹೋರಾಟದ ಗುಂಗಿನಲ್ಲಿಯೇ ಇದ್ದ ಪತ್ರಿಕೆಗಳು ಮುಂದಿನ ಹಾದಿಯಾವುದೆನ್ನುವ ಸ್ಪಷ್ಟ ಕಲ್ಪನೆ ಇಲ್ಲದೆ ತೊಳಲಾಡುತ್ತಿದ್ದವು. ಈ ಸಂದರ್ಭದಲ್ಲಿ ಹುಟ್ಟಿದ ಪ್ರಜಾವಾಣಿ ಜನರ ಆಶೋತ್ತರಗಳಿಗೆ ಸ್ಪಂದಿಸಿ ಜನವಾಣಿಯಾಗಿ ಮೆರೆಯಿತು. ಅಠಾರ, ಕಛೇರಿ, ವಿಧಾನಸೌಧದ ಆಳರಸರು, ಅಧಿಕಾರಿಗಳು ಮಾತ್ರ ಸುದ್ದಿಯಾಗಲಿಲ್ಲ. ವಿಧಾನಸೌಧದ ಲಿಫ್ಟ್ ಚಾಲಕನೂ ಸುದ್ಧಿಯಾದ, ಮುಂಜಾನೆ ಬೀದಿಯಲ್ಲಿ ಚಿಂದಿ ಆಯುವ ಪೋರನೂ ಸುದ್ಧಿಗೆ ಮೂಲವಾದ ಪಟ್ಟಣಿಗರ, ಗ್ರಾಮೀಣ ಜನತೆಯನ್ನೂ ಕಾಡುವ ಸಮಸ್ಯೆಗಳೆಲ್ಲಾ ಪತ್ರಿಕೆಗೆ ಗ್ರಾಸವಾದವು. ದನಿಯಿಲ್ಲದವರ ದನಿಯಾಯಿತು ಪ್ರಜಾವಾಣಿ. ಜನರಿಗೆ ಲೋಕ ವಿಚಾರವನ್ನು ಸರಳವಾಗಿ ತಿಳಿಸಿ ಅದರ ಹಿನ್ನಲೆ ಪರಿಣಾಮಗಳ ಬಗೆಗೆ ಮಾಹಿತಿ ನೀಡಿ ಅವರ ವಿಚಾರ ಶಕ್ತಿ ಬೆಳೆಸುವುದಕ್ಕೆ ಪ್ರಜಾವಾಣಿ ಆದ್ಯತೆ ನೀಡಿತು. ಅದಕ್ಕೆ ಪೂರಕವಾಗಿ ಹಲವಾರು ಅಂಕಣಗಳು.
ಲವಲವಿಕೆಯಿಂದ ಕೂಡಿದ ವರದಿಗಾರಿಕೆ, `ಸದನ ಸಮೀಕ್ಷೆ ಅಂಕಣ. ಶಾಸನ ಸಭಾ ಕಾರ್ಯಕಲಾಪಗಳು ಸಲಹಾವಲೋಕನ, ಓದುಗರು ಆಸಕ್ತಿಯಿಂದ ಎದಿರು ನೋಡುತ್ತಿದ್ದ ಅಂಕಣ, ಮುಖ್ಯ ವರದಿಗಾರ ಎಸ್ ವಿ ಜಯಶೀಲರಾವ್ ಬರಹ.
ಕ್ರೀಡೆಗಳಿಗೆ ಪೂರ್ಣ ಒಂದು ಪುಟ ಮೀಸಲು. ಕನ್ನಡದಲ್ಲಿ ಪ್ರಥಮ. ಕ್ರೀಡಾಪುಟದ ಸಂಪಾದಕ. ಎಚ್. ಎಸ್. ಸೂರ್ಯನಾರಾಯಣ-ಸೂರಿ, ವರದಿ, ವಿಮರ್ಶೆಗಳು ಕ್ರೀಡಾಲೋಕದಲ್ಲಿ ಮಾನ್ಯ. ಜಿಲ್ಲಾ ಸುದ್ಧಿಗಳನ್ನು ಒಪ್ಪ ಓರಣಮಾಡಿ ಪ್ರಕಟಣೆಗೆ ಪ್ರತ್ಯೇಕ ತಂಡ, ಅಂತೆಯೇ ವಾಣಿಜ್ಯ ಸುದ್ಧಿಗೂ ವ್ಯವಸ್ಥೆ.
ರವಿವಾರದ ಸಂಚಿಕೆ, ಪ್ರತ್ಯೇಕ ವಾರಪತ್ರಿಕೆಯ ಕೊರತೆ ನಿವಾರಿಸುವ ವಿಭಾಗ. ಮೊದಲು ನಾಲ್ಕು ಅನಂತರ ಆರು ಪುಟಗಳು. ಸಾಹಿತ್ಯ, ವಿಜ್ಞಾನ, ಧರ್ಮ, ರಾಜಕಾರಣ, ಶಿಕ್ಷಣ, ಮನರಂಜನೆ, ಜನಜೀವನಕ್ಕೆ ಸಂಬಂಧಪಟ್ಟ ಎಲ್ಲ ವಿಚಾರಗಳ ಸಮಗ್ರ ಚಿಂತನೆ. ಸಾಪ್ತಾಹಿಕ ಪುರವಣೆ. ಹಿರಿಯ ಸಾಹಿತಿಗಳಿಗೆ ಪುರಸ್ಕರಿಸಿತು. ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡಿತು. ನವೋದಯದಿಂದ ದಲಿತಸಾಹಿತ್ಯದವರಿಗೆ ಎಲ್ಲ ಚಟುವಟಿಕೆಗಳಿಗೆ ವೇದಿಕೆಯಾಯಿತು. ನೆರೆ ನಾಡಿನಲ್ಲಿರುವ ಅನಿವಾಸಿ ಭಾರತೀಯರ ಒತ್ತಾಯದ ಬೇಡಿಕೆಯ ಮೇಲೆ, ರವಿವಾರದ ಸಂಚಿಕೆಯನ್ನು, ಅಂಚೆಯಲ್ಲಿ ಪೂರೈಸಲು ಚಂದಾ ವ್ಯವಸ್ಥೆ ಮಾಡಿದ್ದು ಪ್ರಜಾವಾಣಿ ವೈಶಿಷ್ಟ್ಯ. ಸಾಪ್ತಾಹಿಕ ಪುರವಣಿಯ ಆರಂಭದ ಸಂಪಾದಕರು ಎಂ ಬಿ ಸಿಂಗ್. 
ಪ್ರಜಾವಾಣಿಯ ದೀಪಾವಳಿ ಸಂಚಿಕೆಗಳು, ಸಾಹಿತ್ಯ ಸಂಚಿಕೆಗಳ ವೈಶಿಷ್ಟ್ಯಪೂರ್ಣವಾಗಿದ್ದವು. ಇಂದಿನ ಹಲವು ಪ್ರಸಿದ್ಧ ಕತೆಗಾರರು ಪ್ರಜಾವಾಣಿ ದೀಪಾವಳಿ ಕಥಾಸ್ಪರ್ಧೆ ಮೂಲಕ ಬೆಳಕಿಗೆ ಬಂದವರು. ದೀಪಾವಳಿ ಸಂಚಿಕೆಯ ಜೊತೆಗೆ ಉಪಯುಕ್ತ ಮಾಹಿತಿ ನೀಡುವ ಪುಸ್ತಿಕೆಗಳನ್ನು ಉಚಿತವಾಗಿ ನೀಡುವ ಸಂಪ್ರದಾಯ ಆರಂಭಿಸಿದ್ದು ಪ್ರಜಾವಾಣಿ ಹೆಗ್ಗಳಿಕೆ. ಇಂತಹ ಹಲವಾರು ಪ್ರಥಮಗಳಿಗೆ ಪ್ರೇರಕ ಶಕ್ತಿ ಟಿ ಎಸ್ ರಾಮಚಂದ್ರರಾವ್. ಅವರ ಯೋಜನೆಗಳಿಗೆ ಒತ್ತಾಸೆಯಾಗಿ ನಿಂತದ್ದು ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್‍ನ ಅಧ್ಯಕ್ಷ ಕೆ ಎನ್ ಗುರುಸ್ವಾಮಿ ಅವರ ವೈಯುಕ್ತಿಕ ಆಸಕ್ತಿ, ಆರ್ಥಿಕ ಬೆಂಬಲ ಮತ್ತು ಸಂಸ್ಥೆಯ ಕಾರ್ಯದರ್ಶಿಗಳಾದ ಕೆ ಎನ್ ನೆಟ್ಟಕಲ್ಲಪ್ಪ ಅವರ ವ್ಯವಹಾರ ಕೌಶಲ ಮತ್ತು ಟಿ ಎಸ್ ರಾಮಚಂದ್ರರಾವ್ ಅವರ ಸಮರ್ಥ ಮಾರ್ಗದರ್ಶನ.
ಕನ್ನಡ ಪತ್ರಿಕೋದ್ಯಮದಲ್ಲಿ `ಪ್ರಜಾವಾಣಿಯನ್ನು ಹೊಸ ಎತ್ತರಕ್ಕೆ ಮುಟ್ಟಿಸಿದ ಟಿ ಎಸ್ ರಾಮಚಂದ್ರರಾಯರು (ನಿಧನ : 11.04.1977) ನಿಧನರಾದ ಮೇಲೆ ಸುದ್ಧಿ ಸಂಪಾದಕರಾಗಿದ್ದ ವೈ ಎನ್ ಕೃಷ್ಣಮೂರ್ತಿ (ನೋಡಿ) ಸಂಪಾದಕರಾದರು. ಪ್ರಜಾವಾಣಿ ಸಾಪ್ತಾಹಿಕದಲ್ಲಿದ್ದು ನಂತರ ಸುಧಾ ಸಂಪಾದಕರಾಗಿದ್ದ ಎಂ ಬಿ ಸಿಂಗ್, ಪ್ರಜಾವಾಣಿಗೂ 1980ರಲ್ಲಿ ಸಂಪಾದಕರಾದರು. ಅನಂತರ ಪ್ರಿಂಟರ್ಸ್ ಲಿಮಿಟೆಡ್‍ನ ಮ್ಯಾನೇಜಿಂಗ್ ಡೈರೆಕ್ಟರಾದ ಕೆ ಎನ್ ಹರಿಕುಮಾರ್ ಪ್ರಜಾವಾಣಿಯಲ್ಲಿ, ಸಂಸ್ಥೆಯ ಇತರ ಪ್ರಕಟಣೆಗಳಾದ `ಸುಧಾ `ಮಯೂರ ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳಿಗೆ ಸಂಪಾದಕರಾದರು. ಈಗಿನ ಸಂಪಾದಕರು ಕೆ ಎನ್ ಶಾಂತಕುಮಾರ್.
ಮುದ್ರಣ ಕ್ಷೇತ್ರಕ್ಕೆ `ಪ್ರಜಾವಾಣಿ ಕೊಡುಗೆ ಮಹತ್ತ್ವದ್ದು. ಸಾಲಕ್ಷರ ಜೋಡಣೆ (ಲೈನೋ ಟೈಪ್) ಮತ್ತು ಗಣಕ ಯಂತ್ರ ಬಳಸಿ ಅಕ್ಷರ ಜೋಡಣೆಗೆ ಅಗತ್ಯವಾದ ಕೀಲಿಮಣೆ ಹಾಗೂ ಅಕ್ಷರ ಶೈಲಿಗಳನ್ನು ರೂಪಿಸಿ, ಬಳಕೆಗೆ ತಂದಿತು. ಮುದ್ರಣ-ವಿನ್ಯಾಸಕ್ಕಾಗಿ ಪ್ರಜಾವಾಣಿ ಒಂಬತ್ತು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದೆ.

ಮಯೂರ
ಡೆಕನ್ ಹೆರಾಲ್ಡ್, ಪ್ರಜಾವಾಣಿ ದೈನಿಕ, ಸುಧಾ ವಾರಪತ್ರಿಕೆಗಳನ್ನು (ನೋಡಿ)ಪ್ರಕಟಿಸಿದ ಉದ್ಯಮಿ ಕೆ ಎನ್ ಗುರುಸ್ವಾಮಿ ನೇತೃತ್ವದ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಾಲ್ಕನೇ ಪ್ರಕಟಣೆ `ಮಯೂರ. ಕಥಾ ಸಾಹಿತ್ಯ ಪ್ರಧಾನ ಮಾಸಪತ್ರಿಕೆ. 1965ರಲ್ಲಿ ಪ್ರಕಟಣೆ ಆರಂಭಿಸಿತು. ತಿಂಗಳ ತಿಳಿಗಾಳಿನಂತಹ ತಿಳಿಹಾಸ್ಯ, ಪ್ರತಿಭಾಸಂದರ್ಶನ, ಜಗತ್‍ಪ್ರಸಿದ್ಧವಾದ ಕತೆಗಳ ಅನುವಾದ ಪ್ರಕಟಣೆ ಇದರ ವೈಶಿಷ್ಟ್ಯ. ಮುಮ್ಮಡಿ ಕೃಷ್ಣರಾಜ ಒಡೆಯರ್ ಬರೆದ `ಸೌಗಂಧಿಕಾ ಪರಿಣಯ ಮತ್ತು ಗುಲ್ವಾಡಿಯವರ `ಇಂದಿರಾಬಾಯಿ ಸೇರಿದಂತೆ ಕನ್ನಡದ ಆರಂಭಕಾಲದ ಕಾದಂಬರಿಗಳನ್ನು ಸಂಗ್ರಹರೂಪದಲ್ಲಿ ಪ್ರಕಟಿಸಿತು(ಸಂಗ್ರಹ : ನಿರಂಜನ) ಕಥಾಸಾಹಿತ್ಯದ ಪರಿಧಿಯಲ್ಲೇ ಅನೇಕ ಪ್ರಯೋಗಗಳನ್ನು ನಡೆಸಿತು. ಐತಿಹಾಸಿಕ, ಪೌರಾಣಿಕ, ಪತ್ತೇದಾರಿ ವೈಜ್ಞಾನಿಕ ಪ್ರಕಾರಗಳಿಗೆ ಸೇರಿದ ಕತೆಗಳಲ್ಲದೆ, ಓದುಗರೂ ಕಥಾಸಾಹಿತ್ಯ ರಚನೆಗೆ ಪ್ರಚೋದನೆ ನೀಡುತ್ತಿದ್ದ ಅಂಕಣಗಳು; `ಅಂಗೈಯಲ್ಲಿ ಅರವನ `ಬುತ್ತಿಚಿಗುರು ಮತ್ತು ಖ್ಯಾತ ಕತೆಗಾರರು ಬರೆದ `ಅಪೂರ್ಣ ಕತೆಗೆ ಪೂರ್ಣಗೊಳಿಸುವ ಅವಕಾಶ. ಮೂಲ ಲೇಖಕರ ಕಲ್ಪನೆಯ ಮುಕ್ತಾಯವನ್ನು ಪ್ರಕಟಿಸಲಾಗುತ್ತಿತ್ತು. ಇದು ಜನಪ್ರಿಯ ಪ್ರಯೋಗವಾಗಿತ್ತು. ಮಯೂರ ಅನೇಕ ಹೊಸ ಕತೆಗಾರರಿಗೆ ಪ್ರೋತ್ಸಾಹ ನೀಡಿತು. ಪುಟಕ್ಕೊಂದು ವ್ಯಂಗ್ಯಚಿತ್ರ ನೀಡಿ, ಹೊಸ ವ್ಯಂಗ್ಯ ಚಿತ್ರಕಾರರ ಸೃಷ್ಟಿಗೆ ನಾಂದಿ ಹಾಡಿತು.

ಪತ್ರಿಕೆಯ ಮೊದಲ ಸಂಪಾದಕರು ಕೆ ಎನ್ ನೆಟ್ಟಕಲ್ಲಪ್ಪ ಮತ್ತು ಎಂ ಬಿ ಸಿಂಗ್. ಅನಂತರದ ಸಂಪಾದಕರು ಜಿ ಎಸ್ ಸದಾಶಿವ, ಕೆ ಎನ್ ಹರಿಕುಮಾರ್. ಈಗಿನ ಸಂಪಾದಕರು ಕೆ ಎನ್ ಶಾಂತಕುಮಾರ್.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ